ಎಂ. ಜೆ. ಅಕ್ಬರ್ ಆಧುನಿಕತೆಯ ಸವಾಲುಗಳ ಕುರಿತಂತೆ ಮಾತನಾಡಿ, ನೂರು ವರ್ಷ ಹಿಂದಿನ ಚರ್ಚೆಗಿಂತ ನೂರು ವರ್ಷ ಮುಂದಿನ ಭಾರತ ಹೇಗಿರಬೇಕೆಂಬ ಚೆರ್ಚೆ ಈ ದೇಶಕ್ಕೆ ಬೇಕಾಗಿದೆ. ಇಹಿಹಾಸವನ್ನು ದ್ವೇಷದ ಮೂಲವಾಗಿ ನೋಡದೆ, ಕಲಿಯಬೇಕಾದ ಪಾಠವಾಗಿ ನೋಡಿದರೆ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು.

ಭಾರತೀಯರ ತಪ್ಪುಗಳು ಭಾರತದ ತಪ್ಪುಗಳಲ್ಲ. ಆದ್ದರಿಂದ ಭಾರತೀಯರು ಮಾಡಿದ ತಪ್ಪುಗಳನ್ನು ಭಾರತದ ತಪ್ಪುಗಳೆಂದು ಕರೆಯಬೇಡಿ. ಭಾರತ ಮಹಾತ್ಮ ಗಾಂಧಿ ಕಾರಣಕ್ಕೆ ಜಾತ್ಯಾತೀತ ಆಗಲಿಲ್ಲ, ಭಾರತದ ಮಣ್ಣಿನ ಗುಣವೇ ಜಾತ್ಯಾತೀತವಾದ್ದರಿಂದ ಮಹಾತ್ಮ ಗಾಂಧಿ ಕೂಡ ಜಾತ್ಯಾತೀತರಾದರು. ವಿಶ್ವದಲ್ಲಿ ಭಾರತದಷ್ಟು ಜಾತ್ಯಾತೀತ ದೇಶವನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ನಿತ್ಯ ಬೆಳಗಿನ ಜಾವ ಅಜಾನ್ ನಡೆಯುವ ವೇಳೆಯಲ್ಲಿ ದೇವಸ್ಥಾನದ ಗಂಟೆಗಳ ಸದ್ದು ಕೇಳುತ್ತದೆ. ಇದರ ಹಿಂದೆಯೇ ಚರ್ಚಿನ ಗಂಟೆ ಮತ್ತು ಗುರುದ್ವಾರದ ಪ್ರಾರ್ಥನೆ ಕೇಳಿಸುತ್ತದೆ. ಹೀಗೆ ಒಂದೇ ಅವಧಿಯಲ್ಲಿ ಎಲ್ಲಾ ಸಮುದಾಯಗಳ ಪ್ರಾರ್ಥನಾ ಧ್ವನಿ ಕೇಳುವುದು ಭಾರತದಲ್ಲಿ ಮಾತ್ರ. ಆದ್ದರಿಂದ ಕೆಲವು ಭಾರತೀಯರು ಮಾಡಿದ ತಪ್ಪಿಗೆ ಭಾರತವನ್ನು ಹೊಣೆ ಮಾಡಬೇಡಿ ಎಂದರು.

ನಂಬಿಕೆಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ ಇಲ್ಲದ ದೇಶ ಆಧುನಿಕ ದೇಶವಾಗಲು ಸಾಧ್ಯವಿಲ್ಲ. ರಾಷ್ಟ್ರೀಯತೆ ಇದ್ದ ಮಾತ್ರಕ್ಕೆ ಆ ದೇಶವನ್ನು ಆಧುನಿಕ ದೇಶ ಎನ್ನಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೂ ಒಂದು ರಾಷ್ಟ್ರೀಯತೆ ಇದೆ. ಹಾಗಂತ ಅದನ್ನು ಆಧುನಿಕ ದೇಶ ಎನ್ನಲಾಗದು.

ಯಾವ ದೇಶ ಜನರ ಅವರವರ ನಂಬಿಕೆಯನ್ನು ಇಟ್ಟುಕೊಳ್ಳಲು, ಪಾಲಿಸಲು ಅವಕಾಶ ನೀಡುವುದಿಲ್ಲವೋ, ಹಸಿವಿನಲ್ಲಿರುವ ಬಡವರಿಗಾಗಿ ಪರಿಣಾಮಕಾರಿ ಕಾರ್ಯಕ್ರಮ ರೂಪಿಸುವುದಿಲ್ಲವೋ, ಲಿಂಗ ಸಮಾನತೆ ಪಾಲಿಸುವುದಿಲ್ಲವೋ ಅಲ್ಲಿಯವರೆಗೆ ಆ ದೇಶ ಆಧುನಿಕಗೊಳ್ಳಲು ಸಾಧ್ಯವಿಲ್ಲ. ಹಿಂದೂ ಮಹಿಳೆಯರಿಗೆ ಆಸ್ತಿ ಹಕ್ಕು ಬಂದಿದ್ದು ಇತ್ತೀಚಿಗೆ. ಆದರೆ ನೂರಾರು ವರ್ಷಗಳ ಮೊದಲೇ ಮುಸ್ಲಿಂ ಮಹಿಳೆಯರಿಗೆ ಆಸ್ತಿ ಹಕ್ಕು ಬಂದಿದೆ ಅಂದರು.

ಯಾವುದೇ ತಾಯಿ ಮಕ್ಕಳಿಗೆ ಊಟ ಮಾಡಿಸದೆ ತಾನು ಊಟ ಮಾಡುವುದಿಲ್ಲ. ಈ ಅಭ್ಯಾಸ ಪುರುಷರಿಗೆ ಇಲ್ಲ. ಆದ್ದರಿಂದ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ದುಡಿಮೆಯ ಸಮಾನತೆ ಕೊಡುವುದು ದೇಶದ ಒಟ್ಟು ಪ್ರಗತಿಗೆ ಅನುಕೂಲ ಆಗುತ್ತದೆ ಎಂದರು.

ಇವತ್ತಿನ ಯುವ ಜನಾಂಗಕ್ಕೆ ಬೇಕಾಗಿರುವುದು ಹಿಂದಿನ ಇತಿಹಾಸವೂ ಅಲ್ಲ. ಹಿಂದೆ ಯಾವತ್ತೋ ನಡೆದ ಘಟನೆಗಳಲ್ಲ. ಅವರಿಗೆ ಬೇಕಾಗಿರುವುದು ಮುಂದಿನ ಭವಿಷ್ಯ. ರಾಜಕೀಯ ಪಕ್ಷಗಳು ಇವತ್ತಿನ ಯುವ ಜನಾಂಗದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಯೋಜನೆ ರೂಪಿಸದೇ ಇದ್ದರೆ ಆ ಪಕ್ಷಗಳ ಉಳಿವು ಸಾಧ್ಯವಿಲ್ಲ ಎಂದರು.