ವಿಕ್ರಂ ಸಂಪತ್ ಮಾತನಾಡುತ್ತಾ “ ದೇಶ ಎಂಬ ಕಲ್ಪನೆಯೇ ಇರದಿದ್ದಾಗ ಒಬ್ಬ ರಾಜನಾಗಿ ತನ್ನ ಸಾಮ್ರಾಜ್ಯ ವಿಸ್ತಾರಕ್ಕಾಗಿ ಟಿಪ್ಪು ಹೊರಾಡಿದನೇ ಹೊರತು ಆತನನ್ನು ಸ್ವಾತಂತ್ರ ಹೋರಾಟಗಾರ ಎಂದು ಕರೆಯುವುದಕ್ಕಾಗುವುದಿಲ್ಲ” ಎಂದರು. ಯಾವುದೇ ಐತಿಹಾಸಿಕ ಘಟನೆಗಳ ಬಗ್ಗೆಯೂ ಇದೇ ಅಂತಿಮ ಮಾಹಿತಿ ಎನ್ನಲು ಬರುವುದಿಲ್ಲ, ಅದು ಕೇವಲ ಮಧ್ಯಂತರ ಮಾಹಿತಿಗಳಾಗಿರುತ್ತವೆ. ಅವುಗಳನ್ನು ಮರುಪ್ರವೇಶ ಮಾಡುವ ಅವಶ್ಯಕತೆ ಇರುತ್ತದೆ. ಟಿಪ್ಪುವಿನ ಜಯಂತಿ ಆಚರಿಸುತ್ತಿರುವ ಸರ್ಕಾರ ಆತನ ಜನ್ಮ ದಿನಾಂಕವನ್ನೇ ತಪ್ಪಾಗಿ ದಾಖಲು ಮಾಡಿದೆ.  ಜನರ ತೆರಿಗೆ ಹಣದಲ್ಲಿ ಸರ್ಕಾರವೇಕೆ ಟಿಪ್ಪು ಜಯಂತಿಯನ್ನು ಆಚರಿಸಬೇಕು. ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಯೋಚನೆ ಮಾಡುವ ಬದಲು ವಿಮಾನ ನಿಲ್ದಾಣಕ್ಕೆ ರೈಲಿನ ಸೇವೆ ಒದಗಿಸುವ ಬಗ್ಗೆ ಆಲೋಚಿಸಬೇಕು. ದೀಪಾವಳಿ ಸಮಯದಲ್ಲಿ ಮಂಡ್ಯಂ ಐಯ್ಯಂಗಾರ್ ಜನಾಂಗದವರನ್ನು ಮೇಲುಕೋಟೆಯಲ್ಲಿ ಕೊಂದದ್ದರಿಂದ ಇಂದಿಗೂ ಅವರು ದೀಪಾವಳಿಯನ್ನು ಬೇರೆ ದಿನದಂದು ಆಚರಿಸುತ್ತಾರೆ. ಟಿಪ್ಪು ತನ್ನ ಆಡಳಿತದ ಮಾದಲ ಕೆಲವು ವರ್ಷಗಳು ಮತಾಂತರ, ದೇವಾಲಯ, ಮೂರ್ತಿಗಳ ನಾಶದಲ್ಲಿ ತೊಡಗಿದ್ದ. 1791 ರ ಯುದ್ಧದ ಸೋಲಿನ ನಂತರ ಬಹುಧರ್ಮಿಯರನ್ನು ಓಲೈಸುವ ಸಲುವಾಗಿ ದೇವಸ್ಥಾನಗಳಿಗೆ ದಾನ ಕೊಡಲು ಶುರು ಮಾಡಿದ. ಇದರ ಹಿಂದಿನ ರಾಜಕೀಯ ಉದ್ದೇಶವನ್ನು ಅರಿಯಬೇಕು.

ಕೃಷ್ಣಮೂರ್ತಿ ಹನೂರು ಮಾತನಾಡುತ್ತಾ “ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಕ್ಕೆ ಟಿಪ್ಪುವನ್ನು ವೈಭವೀಕರಿಸಲಾಗಿದೆ. ಹೊಯ್ಸಳ ಹುಲಿಯ ಜೊತೆ ಹೋರಾಡಿದ್ದ, ಮದಕರಿ ನಾಯಕ ಆನೆಯ ಜೊತೆ ಹೋರಾಡಿದ್ದ. ಹಾಗೆಯೇ ಎಲ್ಲಾ ರಾಜರುಗಳಂತೆ  ಟಿಪ್ಪುವನ್ನು ಮೈಸೂರು ಹುಲಿ ಎಂಬುದರಲ್ಲಿ ವಿಶೇಷವೇನಿಲ್ಲ. ಸ್ವಾತಂತ್ರ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ತರಲು ಅಂದಿನ ಬರಹಗಾರರು ಟಿಪ್ಪುವನ್ನು ವೈಭವೀಕರಿಸಿ ಬರೆದಿರಬಹುದು. ಆಯಾ ಸಮುದಾಯಕ್ಕೇ ಜಯಂತಿಗಳನ್ನು ಬಿಟ್ಟರೆ ಒಳ್ಳೆಯದು” ಎಂದರು.

ದಿನೇಶ್ ಗುಂಡುರಾವ್ ಮಾತನಾಡುತ್ತಾ “ ಅನೇಕ ವರ್ಷಗಳಿಂದ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಬಹು ದಿನಗಳಿಂದ ಬೇಡಿಕೆ ಇದ್ದಿದ್ದರಿಂದ ಸರ್ಕಾರ ಈ ವರ್ಷದಿಂದ ಟಿಪ್ಪು ಜಯಂತಿ ಆಚರಣೆ ಶುರು ಮಾಡಿದೆ. ಎಲ್ಲರಲ್ಲಿರುವಂತೆ ಆತನಲ್ಲೂ ಕೆಟ್ಟ ಗುಣಗಳಿದ್ದಿರಬಹುದು ಆದರೆ ಆತ ಮಾಡಿರುವ ಒಳ್ಳೆಯ ಕೆಲಸಗಳನ್ನು ಮರೆಯಬಾರದು. ರೇಷ್ಮೆ ಬೆಳೆ, ರಾಕೆಟ್ ತಂತ್ರಜ್ಞಾನ, ಭೂ ಕಂದಾಯ ಮುಂತಾದವು ಟಿಪ್ಪುವಿನ ಕೊಡುಗೆಗಳಾಗಿದೆ, ಅನೇಕ ದೇವಾಲಯಗಳಿಗೆ ದಾನವನ್ನು ನೀಡಿದ್ದಾನೆ. ಎಲ್ಲಾ ರಾಜರುಗಳಂತೆ ರಾಜ್ಯ ವಿಸ್ತರಣೆ ಮಾಡುವಾಗ ಜನರ ಹತ್ಯೆಗಳಾಗಿದೆ. ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಅವನನ್ನು ವಿರೋಧಿಸಬಾರದು” ಎಂದರು.

ತೇಜಸ್ವಿ ಸೂರ್ಯ ಮಾತನಾಡುತ್ತಾ “ ಇತಿಹಾಸ ತಜ್ಞರೇ ಹೇಳುವ ಹಾಗೆ ಆತ ಮತಾಂತರ, ದೇವಸ್ಥಾನಗಳ ನಾಶದಲ್ಲಿ ತೊಡಗಿದ್ದ. ಟಿಪ್ಪು ಅಫ್ಘಾನ್ ದೊರೆಗಳಿಗೆ ಪತ್ರ ಬರೆದು ಭಾರತವನ್ನು ಆಕ್ರಮಿಸುವಂತೆ ಹೇಳಿದ್ದ. ಪಾರ್ಸಿ ಭಾಷೆ ಹೇರಿದ್ದ. ಕೆಲವು ಊರುಗಳ ಹೆಸರುಗಳನ್ನೂ ಬದಲಾವಣೆ ಮಾಡಿದ್ದ. ಇಂತ ಧರ್ಮಾಂಧ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಬದಲು ಸಂತ ಶಿಶುನಾಳ ಶರೀಫರಂತಹ ಜಯಂತಿಯನ್ನು ಆಚರಿಸುವ ಮನಸ್ಸು ಮಾಡಬೇಕು” ಎಂದರು.