ಉದ್ಯಮಿ, “ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ” ದ ಅಧ್ಯಕ್ಷ ಬೆಂಗಳೂರಿಗರಾದ ನಂದನ್ ನಿಲೇಕಣಿ ಮತ್ತು ಜೂಲಿಯಾ ಕಂಪ್ಯೂಟಿಂಗ್ ಸಹ ಸಂಸ್ಥಾಪಕರಾದ ವಿರಾಲ್ ಶಾ ಜೊತೆಯಾಗಿ “ರೀಬೂಟಿಂಗ್ ಇಂಡಿಯ” ಎಂಬ ಪುಸ್ತಕವನ್ನು ರಚಿಸಿದ್ದಾರೆ. ವಿರಾಲ್ ಶಾ ರವರು “ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ” ಗೆ ಯೋಜನೆ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ನಿಲೇಕಣಿಯವರು ಮಾತನಾಡುತ್ತ “ನಮ್ಮಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಕೊರತೆಯಿಲ್ಲ ಆದರೆ ಯೋಜನೆಗಳನ್ನು ಜಾರಿಗೆ ತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. UID ಯೋಜನೆಗೆ ವ್ಯವಹರಿಸುವಾಗ ರಾಜಕಾರಣಿಗಳು, ಅಧಿಕಾರಿಗಳು, ಶಿಕ್ಷಣ ತಜ್ಞರು ಈ ಯೋಜನೆಗೆ ಬೆಂಬಲ ಸೂಚಿಸಿ ತಾವೂ ಪಾಲ್ಗೊಳ್ಳಲು ಉತ್ಸುಕತೆ ತೋರಿದರು” ಎಂದು ತಿಳಿಸಿದರು.

ಪ್ರತೀ ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಪ್ರಧಾನ ಕಾರ್ಯದರ್ಶಿಗಳನ್ನು ಒಪ್ಪಿಸಿ ಯೋಜನೆ ವ್ಯಾಪ್ತಿಗೆ ತಂದದ್ದು, ಜನ ನಮ್ಮ ಬಳಿ ಬರುವ ಬದಲು ನಾವೇ ಜನರ ಬಳಿಗೆ ಹೋದದ್ದು ಕೂಡ ಯೋಜನೆ ಯಶಸ್ವಿಗೆ ಇನ್ನೊಂದು ಕಾರಣ.

ವಿರಾಲ್ ಶಾ ಮಾತನಾಡುತ್ತಾ ” ನಿಲೇಕಣಿಯವರನ್ನು ಒಮ್ಮೆ ಕಾನ್ಫರೆನ್ಸ್ ನಲ್ಲಿ ಭೇಟಿ ಮಾಡಿದಾಗ ಸಮಾಜಕ್ಕೆ ನಾನೂ ಏನಾದರೂ ಕೊಡುಗೆ ನೀಡಬೇಕು ಎಂದು ಹೇಳಿದೆ. ಕೆಲವು ಸಭೆಗಳಲ್ಲಿ ಭಾಗವಹಿಸಿ ನಂತರ ನಿರ್ಧಾರ ಮಾಡುವಂತೆ ಹೇಳಿದರು”.

” ನಾನು ಆಧಾರ್ ಯೋಜನೆಗೆ ಸೇರಿದಾಗ ನನಗೆ 29 ವರ್ಷವಾಗಿತ್ತು. ನಂದನ್ ನಿಲೇಕಣಿ ಮತ್ತು ರಾಮ್ ಸೇವಕ್ ಶರ್ಮರವರ ನೇತೃತ್ವದಲ್ಲಿ ನನಗೆ ಕಲಿಯಲು ಬಹಳ ಅನುಕೂಲವಾಯಿತು”.

ಹಿಂದುಸ್ತಾನ್ ಟೈಮ್ಸ್ ನ ಸಂಪಾದಕರಾದ ಸಮರ್ ಹಲರ್ನ್ಕರ್ ಸಂವಾದ ನಡೆಸುತ್ತಾ “ ದೆಹಲಿಯಲ್ಲಿ ಪ್ರತೀ ದಿನ ರಾತ್ರಿ ಸುಮಾರು 60000 ದಿಂದ 70000 ಟ್ರಕ್ ಗಳು ಚಲಿಸುವುದರಿಂದ 30% ವಾಯು ಮಾಲಿನ್ಯಕ್ಕೆ ಕಾರಣವಾಗಿರುವುದನ್ನು ಚರ್ಚೆಗೆ ತಂದರು.

ಇದಕ್ಕೆ ಉತ್ತರಿಸುತ್ತಾ ನಿಲೇಕಣಿ “ ದೆಹಲಿ ಮೂಲಕ ಉತ್ತರಪ್ರದೇಶ, ರಾಜಸ್ಥಾನಕ್ಕೆ ತೆರಳುವ ಟ್ರಕ್ ಗಳಿಗೆ RFID ಟ್ಯಾಗ್ ಅಳವಡಿಸುವ ಮೂಲಕ ಮಾಲಿನ್ಯ ತೆರಿಗೆ ವಿಧಿಸುವುದು ಸುಲಭದ ವಿಧಾನವಾಗಿದೆ. ಹಾಗೆಯೇ  RFID ಟ್ಯಾಗ್ ಗಳನ್ನ ಕಾರ್ ಗಳಿಗೆ ಅಳವಡಿಸುವುದರಿಂದ ಅಲ್ಪ ಮಟ್ಟದಲ್ಲಿ ದೆಹಲಿಯ ಸಂಚಾರ ದಟ್ಟಣೆಯನ್ನೂ ತಡೆಯಬಹುದಾಗಿದೆ ಮತ್ತು ಸ್ವಯಂಚಾಲಿತವಾಗಿ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಟೋಲ್ ಗಳಲ್ಲಿ ಟ್ರಕ್, ಕಾರ್ ಗಳನ್ನ ನಿಲ್ಲಿಸಿ ಹಣ ಪಡೆಯುವ ಬದಲು, ಮಾಹಿತಿ ಮತ್ತು ತಂತ್ರಜ್ಞಾನದ ಸಹಾಯದಿಂದ ಇದನ್ನು ಸರಳೀಕರಿಸಬಹುದಾಗಿದೆ.” ಎಂದು ಉತ್ತರಿಸಿದರು.

ಚಲನಶೀಲತೆಯ ಬಗ್ಗೆ ಹೇಳುತ್ತಾ “ಸರ್ಕಾರದ ಸೇವೆಗಳನ್ನು ಪಡೆಯುವವರಿಗೆ ಅನುಕೂಲವಾಗುವಂತೆ ಜನರು ಸ್ವಕ್ಷೇತ್ರದಲ್ಲಿರದೆ ಯಾವ ಊರಿನಲ್ಲಿದ್ದರೂ ವೋಟ್ ಮಾಡಲು, ರೇಶನ್ ಪಡೆಯಲು ಸಾಧ್ಯವಾಗಬೇಕಿದೆ ” ಎಂದರು.  ತಮ್ಮ ಪುಸ್ತಕದಲ್ಲಿ ತನ್ನಿಂದ ಆಗಿರುವ ಕೆಲಸ ಮತ್ತು ಮುಂದೆ ಮಾಡಬೇಕಾದ ಕೆಲಸದ ಬಗ್ಗೆ ಬರೆದಿರುವುದಾಗಿ ತಿಳಿಸಿದರು.