2015 ರ ಬೆಂಗಳೂರು ಸಾಹಿತ್ಯ ಉತ್ಸವವನ್ನು ಕಾಶ್ಮೀರಿ ಬರಹಗಾರ ಮೊಹಮ್ಮದ್ ಅಜೂರ್ ದಾ ಮತ್ತು ಕನ್ನಡದವರೇ ಆದ ಇಂಗ್ಲಿಷ್ ಲೇಖಕಿ ಶಶಿ ದೇಶಪಾಂಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ತಡವಾಗಿ ಬಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಸಾಹಿತ್ಯಾಸಕ್ತರನ್ನು ಎರಡೂ ದಿನದ ಗೋಷ್ಠಿಗಳಿಗೆ ಸ್ವಾಗತಿಸಿದರು.

ಶಶಿ ದೇಶಪಾಂಡೆಯವರು ಉದ್ಘಾಟನ ಬಾಷಣ ಮಾಡುತ್ತಾ, “ಸಾಹಿತ್ಯೋತ್ಸವದಲ್ಲಿ ಭಾಗವಹಿಸುವುದು ಭಾಗವಹಿಸದಿರುವುದು ಕೂಡ  ರಾಜಕೀಯ ನಿಲುವು ತಳೆಯುತ್ತಿರುವುದು ದುರದೃಷ್ಟಕರ. ಸಾಹಿತ್ಯ ಉತ್ಸವ ಬರಹಗಾರರು, ಓದುಗರು ಮತ್ತು ಬೆಂಗಳೂರಿಗರ ಉತ್ಸವವಾಗಿದೆ, ಆದ್ದರಿಂದ ಮುಂಚೆ ಒಪ್ಪಿಕೊಂಡಂತೆಯೇ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದೇನೆ. ಸಾಹಿತ್ಯ ಲೋಕದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ಮಾತನಾಡಬೇಕೆಂದುಕೊಂಡಾಗ, ಚೆನೈ ಮಳೆಯ ದುರಂತ, ಪ್ಯಾರಿಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿಗಳು ತಲೆಯಲ್ಲಿ ಸುಳಿದು ಗೊಂದಲಕ್ಕೊಳಗಾದೆ. ಜಗತ್ತು ಸಂಕಷ್ಟದಲ್ಲಿದ್ದಾಗ ಸಾಹಿತಿಗಳು ಕಲ್ಪನಾ ಲೋಕದ ಕತೆಗಳನ್ನು ಬರೆಯುವಾಗ ಇಂತ ಗೊಂದಲಗಳು ಸಾಮಾನ್ಯ” ಎಂದರು.

“ಸಾಹಿತಿಗಳು ಪ್ರಶಸ್ತಿ ಹಿಂತಿರುಗಿಸುತ್ತಿರುವುದೇ ಬಹು ಮುಖ್ಯವಾಗಿ ಚರ್ಚೆಯಾಗುತ್ತ, ಜನ ಅದರ ಹಿಂದಿನ ಕಾರಣವನ್ನ ಮರೆಯುತ್ತಿದ್ದಾರೆ. ಒಂದು ಪ್ರತಿಭಟನೆಯಾಗಿ ಪ್ರಾರಂಭವಾದದ್ದು ಈಗ ಸಾಹಿತ್ಯದ ಎರಡು ಗುಂಪುಗಳ ನಡುವಿನ ಜಗಳವಾಗಿ ಮಾರ್ಪಾಟಾಗುತ್ತಿದೆ. ಇಂದು ಒಬ್ಬರ ಮುಖ ಇನ್ನೊಬ್ಬರು ನೋಡಿ ಮಾತನಾದದಷ್ಟು ಬಿಗುವಿನ ವಾತಾವರಣವಿದೆ. ಕಲಬುರ್ಗಿಯವರ ಹತ್ಯೆಯಾದಾಗ ಅದನ್ನು ಕಟುವಾಗಿ ಖಂಡಿಸುವ ಇಚ್ಛಾಶಕ್ತಿಯನ್ನು ಸಾಹಿತ್ಯ ಅಕಾಡೆಮಿಯು ತೋರಿಸದಿದ್ದಾಗ ಅದನ್ನು ಖಂಡಿಸಿ ಅಕಾಡೆಮಿಯಲ್ಲಿನ ನನ್ನ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದೆ” ಎಂದರು

“ಇಂದು ರಾಜಕಾರಣಿಗಳು, ಮಾಧ್ಯಮದವರು, ಸೆಲೆಬ್ರಿಟಿಗಳ ನಡುವೆ ಸಾಹಿತಿಗಳ ಕೂಗು ಹುದುಗಿಹೋಗಿದೆ. ಯಾವುದೇ ದೇಶ ತನ್ನ ಕಲಾವಿದರು, ಸಾಹಿತಿಗಳ ಪ್ರತಿಭಟನೆಗೆ ಗೌರವ ತೋರದಿದ್ದಾಗ ಅದು ನಾಗರಿಕ ದೇಶ ಎನಿಸಿಕೊಳ್ಳುವುದಿಲ್ಲ. ಪ್ರಶಸ್ತಿ ಹಿಂತಿರುಗಿಸುತ್ತಿರುವುದು ಪ್ರಶಸ್ತಿಗೆ ತೋರಿಸುತ್ತಿರುವ ಅಗೌರವವಲ್ಲ. ಯೋಚನೆ ಮತ್ತು ವಾಕ್ ಸ್ವಾತಂತ್ರಕ್ಕೆ ಧಕ್ಕೆಯಾದಾಗ ಸರ್ಕಾರದ ಗಮನ ಸೆಳೆಯಲು ಮಾಡುತ್ತಿರುವ ತ್ಯಾಗ” ಎಂದು ತಿಳಿಸಿದರು.

“ಸಾಹಿತಿಗಳನ್ನು ಖಂಡಿಸುವ ಅನೇಕರು ಅವರ ಸಾಹಿತ್ಯವನ್ನೇ ಓದಿಕೊಂಡಿರುವುದಿಲ್ಲ. ಧರ್ಮ, ಸಂಸ್ಕೃತಿ, ದೇಶಪ್ರೇಮದ ಹೆಸರಿನಲ್ಲಿ ಮುಖಕ್ಕೆ ಮಸಿ ಬಳಿಯುವುದು, ವಿಚಾರವಾದಿಗಳನ್ನು ಕೊಲ್ಲುವುದು, ಒಪ್ಪಿಗೆಯಿಲ್ಲದ ವಿಚಾರ ಇದ್ದ ಪುಸ್ತಕಗಳನ್ನು ನಿಷೇಧಿಸುವುದು ನಡೆಯುತ್ತಿದೆ. ಇದು ಏಕ ಧರ್ಮ, ಏಕ ಸಂಸ್ಕೃತಿಯನ್ನು ಸೃಷ್ಟಿಸುವ ಕೆಲಸಗಲಾಗಿದೆ. ಎಮರ್ಜೆನ್ಸಿ ಸಮಯದಲ್ಲಿ ಜನರಿಗೆ ತಾವು ಯಾರ ವಿರುದ್ಧ ಇದ್ದೇವೆ ಎಂದು ಗೊತ್ತಿತ್ತು  ಆದರೆ ಈಗ ಅದು ತಿಳಿಯದಾಗಿದೆ. ಸಾಹಿತಿಗಳಲ್ಲೇ ಇಂದು ಧ್ರುವೀಕರಣ ಆಗುತ್ತಿರುವುದು ವಿಷಾದನೀಯ”.

“ಭಾರತೀಯ ಸಂಸ್ಕೃತಿಯನ್ನು ನಿಜವಾಗಿ ತಿಳಿಸಿಕೊಟ್ಟವರೆಂದರೆ ಬುದ್ಧ, ಅಕ್ಬರ್, ಗಾಂಧಿ, ಅಶೋಕ ಮುಂತಾದವರು ಮತ್ತು  ಋಗ್ವೇದ, ಉಪನಿಷತ್ತು, ಭಕ್ತಿ ಪಂತದ ಸಾಹಿತ್ಯ. ಕಾನೂನಿನ ಚೌಕಟ್ಟಿನಲ್ಲಿ ಸಾಹಿತಿಗಳು ತಮಗೆ ಅನಿಸಿದ್ದನ್ನು ಸ್ವತಂತ್ರವಾಗಿ ಬರೆಯುವ ಹಕ್ಕು ಇರಬೇಕು” ಎಂದರು.