ಸಿರಿಗನ್ನಡ – ಹಿಂದೆ, ಇಂದು, ಮುಂದೆ  ಎಂಬ ವಿಷಯವನ್ನಿಟ್ಟುಕೊಂಡು ಹರೀಶ್ ಜಿ.ಬಿ. ಯವರು ಚಂದ್ರಶೇಖರ ಕಂಬಾರ,   ಹಂಪ ನಾಗರಾಜಯ್ಯ, ಕಮಲಾ ಹಂಪನಾ, ನರಹಳ್ಳಿ ಬಾಲಸುಬ್ರಹ್ಮಣ್ಯ ರವರೊಂದಿಗೆ ಸಂವಾದ ನಡೆಸಿದರು.

ಕಂಬಾರರು ಮಾತನಾಡುತ್ತ “ ನಾವು ಗಮನಿಸಬೇಕಾದ ಎರಡು ಮುಖ್ಯ ಕ್ರಾಂತಿಗಳೆಂದರೆ ಭಕ್ತಿ ಚಳುವಳಿ ಮತ್ತು ಬ್ರಿಟೀಷರ ಸಾರ್ವಜನಿಕ ಶಿಕ್ಷಣ ಪದ್ಧತಿ” ಎಂದರು. ಭಕ್ತಿ ಚಳುವಳಿಯಲ್ಲಿ ಅವರವರ ದೇವರ ಜೊತೆ ಅವರು ಮಾತನಾಡುವಂತಾಯಿತು. ಹಿಂದೆ ಕೆಲವರಷ್ಟೇ ಶಿಕ್ಷಿತರಿದ್ದರು ಬ್ರಿಟೀಷರ ಸಾರ್ವಜನಿಕ ಶಿಕ್ಷಣ ಪದ್ಧತಿ ಬಂದ ನಂತರ ಎಲ್ಲರಿಗೂ ಶಿಕ್ಷಣ ಸಿಗುವಂತಾಯಿತು. ಶಿಕ್ಷಣ, ತಂತ್ರಜ್ಞಾನ, ಪ್ರಜಾಪ್ರಭುತ್ವ ಹೀಗೆ ಎಲ್ಲದಕ್ಕೂ ಅವರನ್ನೇ ಮಾದರಿ ಮಾಡಿಕೊಳ್ಳಲು ಶುರು ಮಾಡಿದ್ದರಿಂದ ಕ್ರಮೇಣ ನಮ್ಮಲ್ಲಿ ಕೀಳರಿಮೆಯೂ ಬೆಳೆಯಿತು. ಕಾದಂಬರಿ, ನಾಟಕ, ಕತೆಗಳೂ ಅನುಕರಣೆಗೆ ಹೊರತಾಗಿಲ್ಲ. ಇಂದು ಎಲ್ಲಾ ಕ್ಷೇತ್ರದಲ್ಲೂ ಇಂಗ್ಲಿಷ್ ಅನಿವಾರ್ಯವಾಗಿದೆ” ಎಂದರು

ನಮ್ಮಲ್ಲಿ ಇತಿಹಾಸದ ಕಲ್ಪನೆ ಅಷ್ಟಾಗಿ ಇರಲಿಲ್ಲ. ಬ್ರಿಟೀಷರು ಅದನ್ನು ತಂದ ನಂತರ ಇತಿಹಾಸವನ್ನು ಅಳತು ಎಂಬಂತೆ ದೂರ ಇಡಲು ಶುರುವಾಯಿತು. ನಮ್ಮ ದೇಶದಲ್ಲಿ ನೂರಕ್ಕೂ ಹೆಚ್ಚು ಕೃಷಿ ವಿಶ್ವವಿದ್ಯಾನಿಲಯಗಳಿದ್ದರೂ ತೆಂಗಿನ ಮರಗಳಿಗೆ ತಗುಲುವ ನುಸಿ ರೋಗಕ್ಕೆ ಇನ್ನೂ ಯಾವ ಮದ್ದನ್ನೂ ಕಂಡುಹಿಡಿಯಲಾಗಿಲ್ಲ. ಅಮೇರಿಕಾದ ತೆಂಗಿನ ಮರಗಳಿಗೆ ನುಸಿ ರೋಗ ಬಂದು ಅವರು ಔಷಧ ಕಂಡುಹಿಡಿದಾಗ ಬಹುಶಃ ನಾವೂ ಅದನ್ನು ಬಳಸಬಹುದೇನೋ ಎಂದು ವ್ಯಂಗ್ಯವಾಗಿ ನುಡಿದರು.

ಇದಕ್ಕೆ ಹಂಪ ನಾಗರಾಜಯ್ಯ ಪ್ರತಿಕ್ರಿಯಿಸುತ್ತಾ “ ನಮಗೆ ಕೀಳರಿಮೆ ಕಾಡುವ ಅವಶ್ಯಕತೆ ಇಲ್ಲಾ , ನಮ್ಮಲ್ಲಿ ನಮ್ಮದೇ ಆದ ಸಂಸ್ಕೃತಿ, ಪರಂಪರೆ ಇದೆ” ಎಂದರು.

ನರಹಳ್ಳಿ ಬಾಲಸುಬ್ರಹ್ಮಣ್ಯನವರು ಮಾತನಾಡುತ್ತಾ “ ನಾವು ಚರ್ಚೆ ಮಾಡುತ್ತಿರುವ ಸ್ಥಳದಲ್ಲೇ ಕನ್ನಡ ವಾತಾವರಣ ಇಲ್ಲದಿರುವುದು ದುರಂತ” ಎಂದರು. “ಉತ್ಸವ ನಡೆಯುತ್ತಿರುವ ಇಲ್ಲಿ ಊಟ ಕೇಳಲೂ ಇಂಗ್ಲಿಷ್ ಬಳಸಬೇಕಾಗಿರುವುದು ದುರಂತ. ನಾನೇನು ಬೆಂಗಳೂರಿನಲ್ಲಿ ಇದ್ದೀನೋ ಅಥವ ಬೇರೆ ಊರಿನಲ್ಲಿದ್ದೀನೋ ಅನ್ಸಿದೆ. ಭಕ್ತಿ, ಅನುಭಾವ, ಜ್ಞಾನದ ಭಾಷೆಯನ್ನಾಗಿ ಕನ್ನಡ ಬಳಸಬಹುದು ಎಂದು ವಚನಕಾರರು ತೋರಿಸಿಕೊಟ್ಟಿದ್ದಾರೆ. ಆದರೆ ಇಂದು ಕರ್ನಾಟಕದಲ್ಲೂ ಇಂಗ್ಲಿಷ್ ಜ್ಞಾನದ ಮತ್ತು ಪರಿಸರದ ಭಾಷೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಕನ್ನಡ ಕೇವಲ ಸಾಹಿತ್ಯಕ್ಕಷ್ಟೇ ಅಲ್ಲದೇ ತಂತ್ರಜ್ಞಾನದಲ್ಲೂ ಬಳಸಿಕೊಂಡಾಗ ಭಾಷೆಯನ್ನು ಇನ್ನಷ್ಟು ಬೆಳೆಸಬಹುದಾಗಿದೆ. ಮಾಧ್ಯಮಗಳೂ ಸಾಮಾಜಿಕ ಜವಾಬ್ದಾರಿ ಕಳೆದುಕೊಳ್ಳುತ್ತಿದೆ. ಇಂದು ವಾದ ವಿವಾದಗಳ ಬದಲು ಸಂವಾದ ಬೆಳೆಸಬೇಕಾಗಿದೆ” ಎಂದು ನುಡಿದರು

ಕಮಲಾ ಹಂಪನಾ ಮಾತನಾಡುತ್ತಾ  “ ಹಿಂದಿನಿಂದಲೂ ಶಿಕ್ಷಣ, ಆರೋಗ್ಯ, ವಿಜ್ಞಾನ ಎಲ್ಲವೂ ನಮ್ಮಲ್ಲೇ ಇತ್ತು. ಆದರೆ ಬ್ರಿಟಿಷರು ಬಂದು ಅರಿವು ಮಾಡಿಕೊಟ್ಟರು ಅಷ್ಟೇ” ಎಂದರು. “ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೇ ಸೇರಿಸಬೇಕು. ಪ್ರಾಥಮಿಕ ಅಂತದಿಂದಲೇ ಕನ್ನಡ ಮತ್ತು ಇಂಗ್ಲೀಷ್ ಕಲಿಸಿದರೆ ಎರಡೂ ಭಾಷೆಯೂ ಸಿಗುತ್ತದೆ” ಎಂದು ಹೇಳಿದರು.

ಹಂಪ ನಾಗರಾಜಯ್ಯ ಮಾತನಾಡುತ್ತಾ “ ಅನ್ಯ ಭಾಷೆಯ ಪ್ರಭಾವ ಕನ್ನಡಕ್ಕೆ ಹೊಸದಲ್ಲ. ಸಂಸ್ಕೃತ, ಅರಬ್ಬಿ, ಪ್ರಾಕೃತ ಎಲ್ಲವನ್ನೂ ಜೀರ್ಣಿಸಿಕೊಂಡಿದೆ. ಇಂಗ್ಲೀಷ್ ಅಪಾಯ ಅಂತ ತಿಳಿದುಕೊಳ್ಳದೆ ಉಪಾಯದಿಂದ ಕನ್ನಡದಲ್ಲಿ ನಮ್ಮದಾಗಿಸಿಕೊಳ್ಳಬೇಕು” ಎಂದರು. “ಮಧ್ಯಾಹ್ನ ಊಟದ ಸಮಯದಲ್ಲಿ ಕನ್ನಡದ ಚರ್ಚೆಗೆ ಅವಕಾಶ ನೀಡಿರುವುದನ್ನು ಖಂಡಿಸಿದರು. ಬೇರೆಯವರ ಚಿಂತನೆ ಒಪ್ಪುತ್ತೇವೋ ಬಿಡುತ್ತೇವೋ, ಕೇಳಿಸಿಕೊಳ್ಳುವ ತಾಳ್ಮೆಯಾದರೂ ಇರಬೇಕು. ಇದನ್ನು ಎರಡು ಸಾವಿರ ವರ್ಷದ ಹಿಂದೆಯೇ ಕವಿರಾಜಮಾರ್ಗದಲ್ಲಿ ಹೇಳಲಾಗಿದೆ” ಎಂದರು. ಸಾಹಿತಿಗಳು ಮಾತನಾಡಿದರೆ ಅವರನ್ನು ಕೊಲ್ಲುವಂತಹ ಸ್ಥಿತಿ ಬಂದಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.